ರಾಮಾನುಜ ಅಯ್ಯಂಗಾರ್, ಎಂ ಎ
1862-1937. ಪ್ರಸಿದ್ಧ ಕನ್ನಡ ಲೇಖಕರು ಮತ್ತು ಪತ್ರಿಕೋದ್ಯಮಿಗಳು. ಮಂಡ್ಯದಲ್ಲಿ ಜನನ. ಪೆರಿಯಸ್ವಾಮಿ ತಿರುಮಲಾಚಾರ್ಯರಲ್ಲಿ ಸಂಸ್ಕøತ ಅಭ್ಯಾಸಮಾಡಿ ಅನಂತರ ಮೈಸೂರಿನ ಮಹಾರಾಜ ಮತ್ತು ಮದರಾಸಿನ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ವ್ಯಾಸಂಗಮಾಡಿ ಬಿ.ಎ.ಪದವಿ ಪಡೆದರು. ಜ್ಯೋತಿಷ್ಯದಲ್ಲೂ ಗಣಿತಶಾಸ್ತ್ರದಲ್ಲೂ ಪಾಂಡಿತ್ಯವನ್ನು ಗಳಿಸಿಕೊಂಡಿದ್ದರು. ಮೈಸೂರಿನ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಉಪಾಧ್ಯಾಯರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿಯೂ ಅನೇಕ ವರ್ಷಗಳ ಕಾಲ ಸೇವೆಸಲ್ಲಿಸಿದರು. ಆಗಿನ ಮೈಸೂರು ಸರ್ಕಾರದ ಭಾಷಾಂತರಕಾರರಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾದರು.

	ಕನ್ನಡದಲ್ಲಿರುವ ಮತಗ್ರಂಥಗಳನ್ನು ಬೆಳಕಿಗೆ ತರಬೇಕೆಂಬ ಉದ್ದೇಶದಿಂದ ಇವರು ತಮ್ಮ ಸ್ನೇಹಿತರ ನೆರವಿನಿಂದ 1894ರಲ್ಲಿ ಆರ್ಯಮತ ಸಂಜೀವಿನಿ ಎಂಬ ಕನ್ನಡ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಕೆಲವು ಮತಗ್ರಂಥಗಳನ್ನು, ಕೆಲವು ಕನ್ನಡ ಗ್ರಂಥಗಳನ್ನು ಪ್ರಕಟಿಸಿದರು. ಕಾರಣಾಂತರದಿಂದ ಆ ಪತ್ರಿಕೆ ನಿಂತುಹೋಯಿತು. ಅನಂತರ ಇವರು ಎಸ್.ಜಿ. ನರಸಿಂಹಾಚಾರ್ಯರ ನೆರವಿನಿಂದ ಕರ್ನಾಟಕ ಕಾವ್ಯಮಂಜರಿ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಸ್ವಲ್ಪಕಾಲ ನಡೆಸಿದರು. ಆಮೇಲೆ ಕಾವ್ಯಕಲಾನಿಧಿ ಎಂಬ ಪತ್ರಿಕೆಯನ್ನು ಆರಂಭಿಸಿ ಸುಮಾರು ಕಾಲುಶತಮಾನಕಾಲ ನಡೆಸಿದರು. ಕನ್ನಡದ ಅನೇಕ ಹಳಗನ್ನಡ ಗ್ರಂಥಗಳನ್ನು ಪ್ರಥಮ ಬಾರಿಗೆ ಈ ಪತ್ರಿಕೆಯಲ್ಲಿ ಪ್ರಕಟಿಸಿದರು. ವಿದ್ವಾಂಸರುಗಳಾಗಿದ್ದ ಎಂ.ಕೆ. ತಿರುಮಲಾಚಾರ್ ಮತ್ತು ಎಸ್.ಜಿ. ನರಸಿಂಹಾಚಾರ್ಯರು ಇವರ ಕೆಲಸಕ್ಕೆ ನೆರವು ನೀಡುತ್ತಿದ್ದರು.

	ರಾಮಾನುಜಯ್ಯಂಗಾರರು ಪರಿಷ್ಕರಿಸಿ ಪ್ರಕಟಿಸಿದ ಕೆಲವು ಮುಖ್ಯ ಕೃತಿಗಳಿವು: ಪಂಪನ ಆದಿಪುರಾಣ, ಹರಿಹರನ ಪಂಪಾಶತಕಂ, ಕನಕದಾಸರ ಮೋಹನ ತರಂಗಿಣಿ, ನೇಮಿಚಂದ್ರನ ಲೀಲಾವತಿ ಪ್ರಬಂಧ, ತಿರುಮಲಾರ್ಯನ ಚಿಕದೇವರಾಜವಿಜಯ, ಹೊನ್ನಮ್ಮನ ಹದಿಬದೆಯಧರ್ಮ ಮತ್ತು ಮುದ್ದಣನ ರಾಮಾಶ್ವಮೇಧ, ಕವಿಸಮಯಂ (1908), ಕವಿಕಾರ್ಯ ಪ್ರಶಂಸೆ (1913). ಮಹಾಭಾರತ ಕಥಾ ಪ್ರಸಂಗ ಮತ್ತು ಇತರ ಕಥೆಗಳು ಇವು ರಾಮಾನುಜ ಅಯ್ಯಂಗಾರರ ಕೆಲವು ಸ್ವತಂತ್ರ ಕ್ರತಿಗಳು.
      (ಎಂ.ಎ.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ